ಕ್ಯಾಟೆಲ್, ಜೇಮ್ಸ್ ಮೆಕ್‍ಕೀನ್
1860-1944. ಅಮೆರಿಕನ್ ಮನಃಶಾಸ್ತ್ರಜ್ಞ. ವಸ್ತುನಿಷ್ಠ ಕ್ರಮಗಳು, ವೈಯಕ್ತಿಕ ಭಿನ್ನತೆಗಳ ಅಧ್ಯಯನ, ಮಾನಸಿಕ ಮಟ್ಟಗಳನ್ನಳೆವ ವಿಧಾನಗಳು, ವ್ಯಾವಹಾರಿಕ ವಿಷಯಗಳಿಗೆ ಮನಃಶಾಸ್ತ್ರದ ಅನ್ವಯ-ಈ ವಿಷಯಗಳಲ್ಲಿ ಈತ ತೋರಿದ ಆಸಕ್ತಿ ಮತ್ತು ಬೀರಿದ ಪ್ರಭಾವದಿಂದಾಗಿ ಅಮೆರಿಕದ ಮನಃಶಾಸ್ತ್ರ ಹೊಸ ದಾರಿಯಲ್ಲಿ ಬೆಳೆಯಲನುಕೂಲವಾಯಿತು. ಲಾಫಯೆಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ 1880ರಲ್ಲಿ ಯೂರೋಪಿಗೆ ತೆರಳಿ ಗೊಯಟ್ಟಿಂಗೆನ್ನಿನ ಲೋಟ್ಸೆ ಮತ್ತು ಲೀಪ್‍ಜಿûಗ್‍ನಲ್ಲಿ ವಿದ್ವಾಂಸ ವೂಂಟ್‍ನ ಬಳಿ ಶಿಷ್ಯವೃತ್ತಿ ಮಾಡಿದ. 1882ರಲ್ಲಿ ಅಮೆರಿಕ ಹಿಂದಿರುಗಿ ಸ್ಟಾನ್ಲಿಹಾಲ್‍ನ ಶಿಷ್ಯನಾಗಿ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದಲ್ಲಿದ್ದ. ಮರುವರ್ಷ ಲೀಪ್‍ಜಿûಗ್‍ಗೆ ಮರಳಿ ವೂಂಟ್‍ನ ಸಹೋದ್ಯೋಗಿಯಾಗಿ ಮೂರು ವರ್ಷ ಕೆಲಸ ಮಾಡಿದ. ಪ್ರತಿಕೃತಿಯ ಕಾಲ (ಆರ್.ಟಿ.) ಮತ್ತು ವೈಯಕ್ತಿಕ ವೈವಿಧ್ಯಗಳ ಮೇಲೆ ಸಂಶೋಧನೆಗಳನ್ನು ನಡೆಸಿದ. ಅಮೆರಿಕಕ್ಕೆ ಮರಳಿ ಪೆನ್ಸಿಲ್‍ವೇನಿಯ, ಕೊಲಂಬಿಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ. 1891ರಲ್ಲಿ ಕೊಲಂಬಿಯದಲ್ಲಿ ಪ್ರಾಯೋಗಿಕ ಮನಃಶಾಸ್ತ್ರ ಶಾಲೆಯೊಂದನ್ನು ವ್ಯವಸ್ಥೆ ಮಾಡಿ ಇಪ್ಪತ್ತಾರು ವರ್ಷಗಳು ಅದರ ಅಧಿಕಾರಿಯಾಗಿದ್ದ. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಫ್ರಾನ್ಸಿಸ್ ಗಾಲ್ಟನ್ನನ ಜೊತೆಗೂ ಕೊಲಂಬಿಯದಲ್ಲಿ ಬಾಲ್ಡ್‍ವಿನ್ನನ ಜೊತೆಗೂ ಕೆಲಸ ಮಾಡಿದ. ಅಮೆರಿಕದಲ್ಲಿ ಮನಃಶಾಸ್ತ್ರಕ್ಕೆ ವೈಜ್ಞಾನಿಕ ಸ್ಥಾನವನ್ನು ಒದಗಿಸಿಕೊಟ್ಟವನೀತನೇ. 1929ರಲ್ಲಿ ನವಮ ಅಂತರರಾಷ್ಟ್ರ ಮನೋವಿಜ್ಞಾನ ಸಮ್ಮೇಳನ ನಡೆದಾಗ ಇವನೇ ಅದರ ಅಧ್ಯಕ್ಷನಾಗಿದ್ದ. ನಿಯಂತ್ರಿತ ಸಂಯೋಜನೆ, ಸ್ವಚ್ಛಂದ ಸಂಯೋಜನೆ, ಪ್ರತಿಕ್ರಿಯೆಯ ವೇಗ, ಅವಧಾನದ ಪರಿಮಿತಿ, ಮುಂತಾದ ಕ್ಷೇತ್ರಗಳಲ್ಲಿ ಈತ ಕೆಲಸ ಮಾಡಿದ್ದಾನೆ. ಇ.ಎಲ್.ಕಾರ್ನ್‍ಡೈಕ್, ಆರ್.ಎಸ್.ಉಡ್‍ವರ್ತ್, ಡಬ್ಲ್ಯೂ, ಎಫ್. ಡಿಯರ್‍ಬಾರ್ನ್, ಇ.ಕೆ.ಸ್ಟ್ರಾಂಗ್, ಎ,ಟಿ.ಪಾಫೆನ್‍ಬರ್ಗರ್, ಎ,ಐ.ಗೇಟ್ಸ್ ಮುಂತಾದ ಪ್ರಸಿದ್ಧ ಮನಃಶಾಸ್ತ್ರಜ್ಞರು ಈತನ ಶಿಷ್ಯರು. 									 (ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ